"Translations are equivalent to communicating science" opines Kollegala Sharma, Science Communicator, Senior principal scientist at CFTRI.  Translations are just like reciting stories. Stories are an effective source of learning, given their vast scope and structure. Science itself is a type of language, and so science communication and translation for kids face similar challenges. Below is a short story in Kannada about two sisters. Putti is a young girl who is curious to know things that she sees around her. When she sees a picture book, she is curious about mammals like the platypus, but her sister finds it difficult to explain this to Putti as these words are unfamiliar to the toddler’s experience and environment. The story depicts the difficulties of translating science concepts.

ಅನುವಾದ ಅನ್ನುವುದು ಹೀಗೇ. ಮಕ್ಕಳಿಗೆ ಕಥೆ ಹೇಳಿದ ಹಾಗೆ. ಅವರಿಗೆ ತಿಳಿಯದ್ದನ್ನು ತಿಳಿಸುವ ರೀತಿಯಲ್ಲೇ, ಬೇರೆ ಬಾಷೆಯದ್ದನ್ನೂ ನಮ್ಮ ಓದುಗರಿಗೆ ತಿಳಿಸಬೇಕಾಗುತ್ತದೆ. ವಿಜ್ಞಾನವೂ ಬೇರೆ ಭಾಷೆಯೇ ಆಗಿದ್ದರಿಂದ ಇದೇ ಕಥೆ ಅಲ್ಲಿಯೂ ಸಲ್ಲುತ್ತದೆ.


ಧೊಪ್…‌

“ಏನೇ ಅದು ಸದ್ದು?” ಅಮ್ಮ ಅಡಿಗೆ ಮನೆಯಿಂದಲೇ ಕೂಗಿದಳು

ಅಯ್ಯೋ. ಇನ್ನು ಅಕ್ಕ, ಅಮ್ಮ ಇಬ್ಬರೂ ಬರುತ್ತಾರೆ. ಅಷ್ಟರಲ್ಲಿ ಇದೆಲ್ಲ ಸರಿ ಮಾಡಬೇಕು. ಪುಟ್ಟಿ ಕೆಳಗೆ ಬಿದ್ದ ಚೀಲವನ್ನು ನೋಡಿದಳು.

ಅಯ್ಯೋ. ಇದರಲ್ಲಿ ಚಾಕಲೇಟು ಇಲ್ಲ. ಬರೀ ಪುಸ್ತಕ. 

ಶಾಲೆಯಿಂದ ಬಂದ ಅಕ್ಕ ಚೀಲವನ್ನು ಬಿಸಾಡದೆ ಮೇಜಿನ ಮೇಲೆ ಇಟ್ಟಳಲ್ಲ. ಆಗಲೇ ಅದರಲ್ಲೇನೋ ಗುಟ್ಟು ಇರಬೇಕು ಅಂತ ಪುಟ್ಟಿಗೆ ಅನಿಸಿತ್ತು. ಯಾರಾದರೂ ಹುಟ್ಟಿದ ಹಬ್ಬಕ್ಕೆ ಕೊಟ್ಟ ಚಾಕಲೇಟು ಇರಬಹುದು ಅಂದುಕೊಂಡಿದ್ದಳು. ಆದರೆ…

“ಓಹೋ. ಎಷ್ಟೊಂದು ಪುಸ್ತಕ. ಎಷ್ಟೊಂದು ಬಣ್ಣ.”

“ಏಯ್‌ ಪುಟ್ಟಿ. ಅದು ನಂದು ಪುಸ್ತಕ. ಮುಟ್ಟಬೇಡ.” ಬೆನ್ನ ಹಿಂದಿನಿಂದ ಅಕ್ಕ ಹೇಳಿದಳು.

“ಪುಟ್ಟಿ. ಅಕ್ಕನ ಚೀಲ ಮುಟ್ಟಬೇಡ ಅಂತ ಹೇಳಿದ್ದೆ. ಮೈ ಮೇಲೆ ಬಿದ್ದಿದ್ದರೆ?ʼ ಅಮ್ಮ ಕೂಡ ಬೈದಳು.

“ಅಕ್ಕ, ಅಕ್ಕ. ಪುಸ್ತಕ ಕೊಡೇ? ನಾನೂ ನೋಡ್ತೀನಿ.”

“ಏಯ್‌ ಹೋಗೇ. ನಿಂಗೆ ಓದಕ್ಕೆ ಬರೆಯಕ್ಕೆ ಬರತ್ತಾ? ದೊಡ್ಡವಳಾಗು ಆಮೇಲೆ ಕೊಡ್ತೀನಿ.”

ಈ ದೊಡ್ಡವರೆಲ್ಲ ಹೀಗೇ. ದೊಡ್ಡವರಷ್ಟೆ ಪುಸ್ತಕ ಓದಬಹುದು ಅಂದುಕೊಂಡಿದ್ದಾರೆ. ನಂಗೆ ಅಕ್ಷರ ಗೊತ್ತಿಲ್ಲದಿದ್ದರೆ ಏನಂತೆ? ಈ ಬಣ್ಣ, ಬಣ್ಣದ ಚಿತ್ರ ನೋಡಬಹುದು.

“ಅಕ್ಕ. ಚಿತ್ರ ನೋಡ್ತೀನಿ ಕೊಡೇ?”

“ಬೇಡ ಪುಟ್ಟಿ. ಅದು ಶಾಲೆಯ ಪುಸ್ತಕ. ಆಮೇಲೆ ನೀನು ಹರಿದು ಹಾಕಿದರೆ. ದೊಡ್ಡವಳಾದ ಮೇಲೆ ನಿಂಗೂ ಇವೆಲ್ಲ ಸಿಗುತ್ತೆ.” ಈಗ ಅಮ್ಮನ ಸರದಿ.

“ಪರವಾಗಿಲ್ಲ ಅಮ್ಮ. ನಾನು ಬರೇ ಚಿತ್ರ ನೋಡ್ತೀನಿ.”

“ಹೋಗೇ. ಹೋಗೇ. ಅದು ಇಂಗ್ಲೀಷು ಬುಕ್ಕು! ಇದು ದೊಡ್ಡ ಮಕ್ಕಳ ಪುಸ್ತಕ ಗೊತ್ತಾ? ನಿಂಗೆ ಅರ್ಥ ಆಗಲ್ಲ.”

 “ಇಲ್ಲ ಅಕ್ಕ. ನೋಡು. ಇದು ನಾಯಿ. ಇದು ಮಂಚ. ನಾಯಿ ಮಂಚದ ಕೆಳಗೆ ಏನನ್ನೋ ಹುಡುಕುತ್ತಾ ಇದೆ. ಅಲ್ಲವಾ? ನೋಡಿದ್ಯಾ?”

“ಓಹೋಹೋಹೋ. ಓದಕ್ಕೆ ಬರತ್ತಂತೆ. ನಾಯಿ, ಮಂಚ ಸರಿ. ಇದು ಏನು ಹೇಳ್ತೀಯಾ?”

“ಯಾವುದು? ಇದಾ?... ಇದು… ಇದು…”

“ನೋಡು. ನೀನು ಇನ್ನೂ ಚಿಕ್ಕವಳು. ಚಿತ್ರ ನೋಡಕ್ಕೂ ಬರಲ್ಲ.”

“ಇಲ್ಲ ಅಕ್ಕ. ಅದು ಏನೋ ನಾನು ನೋಡಿಲ್ಲ. ಅದು ಏನದು ಅಕ್ಕಾ?ʼ

“ನಾನೂ ನೋಡಿಲ್ಲ. ಆದರೆ ಅದು ಏನು ಅಂತ ನಂಗೆ ಗೊತ್ತು. ಅದಿಕ್ಕೆ ಹೇಳಿದ್ದು ನೀನು ದೊಡ್ಡವಳಾಗಬೇಕು ಅಂತ.”

“ನೀನೂ ನೋಡಿಲ್ಲವಾ? ಮತ್ತೆ ಅದು ಹೆಂಗೆ ನಿಂಗೆ ಗೊತ್ತಾಯಿತು? ಏನದು?”

“ಅದು ಪ್ಲಾಟಿಪಸ್‌ ಅಂತ. ನಮ್ಮ ಟೀಚರ್ರು ಅದರ ಬಗ್ಗೆ ಹೇಳಿಕೊಟ್ಟಿದ್ದರು.”

“ಓ. ನಾನು ನಾಯಿ ಅಂದುಕೊಂಡಿದ್ದೆ. ಈಗೇನಂತೆ. ಪ್ಲಾಟಿಪಸ್‌ ಅಂತ ಹೆಸರು ಅಷ್ಟೆ ತಾನೇ. ಆದರೆ ಅದು ಈಗ ಮಂಚದ ಕೆಳಗೇ ಇದೆಯಲ್ಲ.”

“ಆದರೂ ಪ್ಲಾಟಿಪಸ್ಸೇ ಬೇರೆ, ನಾಯೀನೇ ಬೇರೆ ಗೊತ್ತಾ?, ಅಕ್ಕ ಹೇಳಿದಳು.

“ಅದೇನೋ. ಎರಡೂ ಪ್ರಾಣಿಗಳು ಅಷ್ಟೆ.” ಎಂದಳು ಪುಟ್ಟಿ.

ಹಂಗೆಲ್ಲ ಗೊತ್ತಿಲ್ಲದ ವಿಷಯ ಓದೋದು ಕಷ್ಟ ಗೊತ್ತಾ? ಅದಿಕ್ಕೆ ಮೊನ್ನೆ ನಮ್ಮ ಟೀಚರ್ರು ಬೈದಿದ್ದರು.”

“ಟೀಚರ್ರು ಬೈದರಾ? ಯಾಕೆ? ನೀನೇನು ಮಾಡಿದೆ?” ಅಮ್ಮ ಅಕ್ಕನನ್ನು ಕೇಳಿದರು.

“ಏನಿಲ್ಲ. ಪ್ಲಾಟಿಪಸ್‌ ಹೆಸರನ್ನ ಬರಿ ಅಂತ ಡಿಕ್ಟೇಶನ್‌ ಕೊಟ್ಟಿದ್ದರು. ನಾನು ತಪ್ಪಾಗಿ ಬರೆದಿದ್ದೆ.”

“ಯಾಕೆ? ಅವತ್ತು ನಾನೂ ಹೇಳಿಕೊಟ್ಟಿದ್ದೆನಲ್ಲ? ಮರೆತು ಹೋಯಿತಾ?” ಅಮ್ಮ ಕೇಳಿದರು.

“ಇಲ್ಲಮ್ಮ. ಮರೀಲಿಲ್ಲ. ಇಂಗ್ಲೀಷಲ್ಲಿ ಚೆನ್ನಾಗಿ ಗೊತ್ತು. ಪಿ ಎಲ್‌ ಎ ಟಿ ವೈ ಪಿ ಯು ಎಸ್‌ ಅಂತ. ಆದರೆ ಕನ್ನಡದಲ್ಲಿ ಬರಿ ಅಂದರು. ಬರೆದಿದ್ದು ತಪ್ಪು ಅಂದರು.”

“ಓಹೋ. ಸರಿ ಬಿಡು. ನಿಂಗೆ ಒತ್ತಕ್ಷರ ಇನ್ನೂ ಕಲಿಸಿಲ್ಲ. ಅದು ಹೇಗೆ ಅದನ್ನ ಬರೆಯಕ್ಕೆ ಆಗತ್ತೆ?” ಅಮ್ಮ ಹೇಳಿದರು.

“ಅಲ್ಲಮ್ಮ. ಅಕ್ಕ ಇಂಗ್ಲೀಷಲ್ಲಿ ಬರೀತಾಳೆ. ಕನ್ನಡದಲ್ಲಿ ಯಾಕೆ ತಪ್ಪು ಮಾಡ್ತಾಳೆ?”

“ಪುಟ್ಟಿ ಅದೆಲ್ಲ ಗೊತ್ತಾಗಕ್ಕೆ ನೀನು ದೊಡ್ಡವಳಾಗಬೇಕು. ಕನ್ನಡದಲ್ಲಿ ಸ್ಪೆಲ್ಲಿಂಗು ಸ್ವಲ್ಪ ಕಷ್ಟ. ಇಂಗ್ಲೀಷಲ್ಲಿ ಹಾಗಲ್ಲ. ಅದಿಕ್ಕೆ ಇಂಗ್ಲೀಷು ಹೆಸರನ್ನ ಕನ್ನಡದಲ್ಲಿ ಬರೆಯೋದು ಕಷ್ಟ. “

“ಅಕ್ಕಾ ಅಕ್ಕಾ. ನಿಂಗೆ ಈ ಪುಸ್ತಕ ಓದಕ್ಕೆ ಬರತ್ತೆ ಅಲ್ಲವಾ? ನೀನೇ ಓದಿ ನಂಗೆ ಕಥೆ ಹೇಳ್ತೀಯಾ?”

“ಓ ಅದಕ್ಕೇನಂತೆ? ಹೇಳ್ತೀನಿ.”  ಅಡ್ವೆಂಚರ್ಸ್‌ ಆಫ್‌ ಮಿರಿಂಡಾ – ದಿ ಪ್ಲಾಟಿಪಸ್.‌

“ಏಯ್‌ ಅಕ್ಕ. ನಂಗೆ ಅರ್ಥ ಆಗ್ಲಿಲ್ಲ. ಕನ್ನಡದಲ್ಲಿ ಹೇಳೇ?

“ಅದು ಹೇಗೆ ಹೇಳಲೇ ಪುಟ್ಟಿ. ಇದು ಇಂಗ್ಲೀಷು ಪುಸ್ತಕ.”

“ಅಕ್ಕ. ನೀನು ಓದಿದ್ದೀಯಲ್ಲ. ನಿಂಗೆ ಕಥೆ ಗೊತ್ತಿರತ್ತೆ. ಅದನ್ನೇ ಹೇಳೇ?

“ಏಯ್‌ ಹೋಗೇ. ಅದೇನು ಅಷ್ಟೊಂದು ಸುಲಭ ಅಂದುಕೊಂಡಿದ್ದೀಯಾ?”

“ ಅಕ್ಕ. ಪ್ಲೀಸ್‌ ಹೇಳೇ! ಯಾಕೆ ನಿಂಗೂ ಅರ್ಥ ಆಗಿಲ್ಲವಾ?”

“ಓ. ನಂಗೆ ಅರ್ಥ ಆಗಿದೆ. ಆದರೆ ಇದು ಇಂಗ್ಲೀಷು ಅಲ್ಲವಾ ನಿಂಗೆ ಗೊತ್ತಾಗಲ್ಲ ಅಂದೆ ಅಷ್ಟೆ. ಸರಿ ಹೇಳ್ತೀನಿ ಕೇಳು. ಇದು ಮಿರಿಂಡಾ ದಿ ಪ್ಲಾಟಿಪಸ್ಸಿನ ಸಾಹಸಗಳು.”

“ಮಿರಿಂಡಾ, ಪ್ಲಾಟಿಪಸ್ಸು, ಅದನ್ನೂ ಇಂಗ್ಲೀಷಲ್ಲಿ ಹೇಳಕ್ಕಾ?”

“ಅಯ್ಯೋ. ಅದು ಹೆಸರು ಕಣೇ. ಅವನ್ನ ಇಂಗ್ಲಿಷಲ್ಲಿ ಹೇಗೆ ಹೇಳೋದು?”

“ಸರಿ. ಆಮೇಲೆ?.”

“ಮಿರಿಂಡಾ ಒಂದು ಪ್ಲಾಟಿಪಸ್ಸು. ಪ್ಲಾಟಿಪಸ್ಸು ಅಂದರೆ ಗೊತ್ತಲ್ಲಾ? ಅದು ಒಂದು ಮ್ಯಾಮಲ್?”‌

“ಮ್ಯಾಮಲ್?‌ ಹಂಗಂದ್ರೆ?ʼ

“ಹಂಗಂದ್ರೆ. ಹಂಗಂದ್ರೆ.. ಹಂಗಂದ್ರೆ… “

“ಅಕ್ಕಂಗೂ ಗೊತ್ತಿಲ್ಲ. ಅಕ್ಕಂಗೂ ಗೊತ್ತಿಲ್ಲ.”

“ಏಯ್.‌ ಸುಮ್ನಿರೇ. ಗೊತ್ತಿಲ್ಲ ಅಂತಲ್ಲ. ಕನ್ನಡದಲ್ಲಿ ಏನಂತಾರೆ ಗೊತ್ತಿಲ್ಲ. ಮ್ಯಾಮಲ್‌ ಅಂದರೆ ಹಾಲು ಕುಡಿಸೋ ಪ್ರಾಣಿಗಳು ಅಂತ ನಮ್ಮ ಟೀಚರ್ರು ಹೇಳಿಕೊಟ್ಟಿದ್ದಾರೆ ಗೊತ್ತಾ?.. ಇರು ಅಮ್ಮನ್ನ ಕೇಳ್ತೀನಿ. ಅಮ್ಮಾ. ಅಮ್ಮ. ಮ್ಯಾಮಲ್‌ ಅಂದರೆ ಏನಮ್ಮಾ? ಅದೂ ಹೆಸರಾ?”

“ಮ್ಯಾಮಲ್ಲು ಅಂದರೆ ಸ್ತನಿ ಅಂತ ಮಗಳೇ. ಅದು ಗುಂಪಿನ ಹೆಸರು. “

“ಮತ್ತೆ ಹೆಸರನ್ನು ಹಾಗೇ ಇಡಬೇಕಲ್ಲವಾ?”

“ಇದು ಹೆಸರು ನಿಜ. ಆದರೆ ಇದು ಒಂದು ಗುಂಪಿನ ಹೆಸರು. ಇಂಥವರದ್ದು ಅಂತ ಇಲ್ಲ. ಅದಿಕ್ಕೆ ಇದನ್ನ ನಾವು ಕನ್ನಡದಲ್ಲಿ ಬೇರೆ ಹೆಸರಿಟ್ಟು ಕರೀಬಹುದು. ಸ್ತನಿ ಅಂತ ಅದಕ್ಕೆ ಹೇಳ್ತೀವಿ.”

“ಓಹೋ. ಗೊತ್ತಾಯಿತು.”

“ಸರಿ. ಪ್ಲಾಟಿಪಸ್‌ ಒಂದು ಸ್ತನಿ. ಅದು ಮೊಟ್ಟೆ ಇಡುತ್ತದೆ.”

“ಹೂಂ. ಗೊತ್ತಾಯಿತು. ಅದು ಈಗ ಏನನ್ನೋ ತಿನ್ನಕ್ಕೆ ಹೋಗ್ತಾ ಇದೆ ಅಲ್ಲವಾ?”

“ಪುಟ್ಟಿ. ಜಾಣೆ ಕಣೆ. ಅದು ಹೆಂಗೇ ಗೊತ್ತಾಯಿತು?”

“ಅಯ್ಯೋ ಅಕ್ಕಾ. ಈ ಚಿತ್ರ ನೋಡು. ಪಲಾಟಿಸ್ಸು ಆ ಪಾತ್ರೆ ಕಡೇನೇ ನೋಡ್ತಾ ಇದೆ. ಆ ಪಾತ್ರೇಲಿ ತಿಂಡಿ ಇದೆ ಅಲ್ಲವಾ?”

“ಪುಟ್ಟಿ. ಅದು ಪಲಾಟಿಸ್ಸು ಅಲ್ಲ. ಪ್ಲಾಟಿಪಸ್ಸು. ಆ ಪಾತ್ರೇಲಿ ಇರೋದು ಚೀಸು”

“ಪ..ಪಪ..ಪಲಾಆಆಆಟಿಪಸ್ಸು… ಸರೀನಾ… ಇಂಗ್ಲೀಷಲ್ಲಿ ಯಾಕಪ್ಪ ಅಷ್ಟೊಂದು ಕಷ್ಟದ ಹೆಸರು ಇಡ್ತಾರೆ.”

“ಪುಟ್ಟಿ. ಹೆಸರು ಕಷ್ಟ ಅಲ್ಲ. ನಿಂಗೆ ಓದಕ್ಕೆ ಬರಲ್ಲ. ನೋಡು ನಾನು ಓದಲ್ಲವಾ?”

“ಹೋಗಕ್ಕ. ನೀನು ದೊಡ್ಡವಳು. ಆಮೇಲೆ ಆ ಚೀಸು ಬೆಣ್ಣೇನಾ?”

“ಅಯ್ಯೋ ಪೆದ್ದಿ. ಚೀಸು ಬೆಣ್ಣೆ ಅಲ್ಲ. ಅದು ಚೀಸು.”

“ಆದ್ರೆ ಬೆಣ್ಣೆನೂ ಹಾಗೇ ಹಳದೀಗೆ ಇರುತ್ತೆ ಅಲ್ಲವಾ?”

“ಹೋಗೆ ಪೆದ್ದಿ.  ನಿಂಗೆ ಏನೂ ಹೇಳಿಕೊಡಲ್ಲ. ಸುಮ್ಮನೆ ಪ್ರಶ್ನೆ ಕೇಳ್ತಾ ಇರ್ತೀಯಾ? ಅದು ಇಂಗ್ಲೀಷು ತಿಂಡಿ. ಅದನ್ನ ಚೀಸು ಅಂತಾರೆ. ಅದು ಬೆಣ್ಣೆ ಅಲ್ಲ.”

“ಊಊಊ… ಅಮ್ಮ. ಅಮ್ಮ. ಅಕ್ಕ ಪೆದ್ದಿ ಅಂದಳು.” ಪುಟ್ಟಿ ಅಳುತ್ತಾ ಓಡಿದಳು.


Do join the conversation by leaving your thoughts in the comments section below. You can also reach out to us through our social media channels: Facebook, Twitter and Instagram.

Be the first to comment.